ಮಧುಮೇಹಕ್ಕೆ ಆಯುರ್ವೇದ ಚಿಕಿತ್ಸೆ (Madhumehakke Ayurveda Chikitse)

ಸಕ್ಕರೆ ಕಾಯಿಲೆ ಇದನ್ನು ಮಧುಮೇಹ, ಡಯಾಬಿಟೀಸ್, ಶುಗರ್‌ ಎಂದು ಕರೆಯಲ್ಪಡುವ ಈ ರೋಗವನ್ನು ಅರಿಯದವರೇ ಇಲ್ಲ. ಈಗಂತೂ ಪ್ರತಿ ಮನೆಯಲ್ಲಿಯೂ ಒಬ್ಬರು ಅಥವಾ ಇಬ್ಬರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಮ್ಮೆ ಸಕ್ಕರೆ ಕಾಯಿಲೆಯೆಂದು ತಿಳಿದುಬಂದ ನಂತರ ಜೀವನಪರ್ಯಂತ ಔಷಧ ಸೇವನೆಯು ಅನಿವಾರ್ಯ. ಕೆಲವೊಮ್ಮೆ ಔಷಧಗಳ ಸೇವನೆಯಿಂದಲೂ ಸಕ್ಕರೆಯ ಅಂಶವು ಕಡಿಮೆಯಾಗದೇ ಇನ್ನಿತರ ಆರೋಗ್ಯ ಸಂಬಂಧಿಸಿದ ತೊಂದರೆಗಳಿಗೆ ಕಾರಣವಾಗಬಲ್ಲುದು. ಇಂತಹ ಸ್ಥಿತಿಯಲ್ಲಿ ಆಯುರ್ವೇದ ಚಿಕಿತ್ಸೆಯು ಬಹಳಷ್ಟು ಪರಿಣಾಮಕಾರಿ.

ಆಯುರ್ವೇದವು ಸೂಕ್ತ ಔಷಧಿಗಳೊಂದಿಗೆ ಕ್ರಮಬದ್ಧ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಬದಲಾವಣೆಗಳಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯ ಸ್ಥಿತಿಗೆ ತರುವ ನೈಸರ್ಗಿಕ ವಿಧಾನವಾಗಿದೆ. ಮಧುಮೇಹವು ಅನೇಕ ಜನರಿಗೆ ಸಾಮಾನ್ಯ ಮತ್ತು ನಿರ್ಲಕ್ಷಿತ ಆರೋಗ್ಯ ಸಮಸ್ಯೆಯಾಗಿದೆ. ಸರಿಯಾದ ಆಹಾರದ ಜೊತೆಗೆ ಶಿಸ್ತುಬದ್ಧ ಜೀವನಶೈಲಿ ಹೆಚ್ಚುತ್ತಿರುವ ಸಕ್ಕರೆ ಮಟ್ಟ ಮತ್ತು ಅವುಗಳಿಂದ ಉಂಟಾಗುವ ತೊಡಕುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆಯುರ್ವೇದ ಔಷಧಿಗಳು ಮಧುಮೇಹಕ್ಕೆ ಕಾರಣಗಳಾದ ಅಂಶಗಳನ್ನು ನಿವಾರಿಸಿ ಆಹಾರ ಮತ್ತು ಜೀವನ ಶೈಲಿಯನ್ನು ಸರಿಪಡಿಸುವ ಮೂಲಕ ಸಕ್ಕರೆ ಮಟ್ಟವನ್ನು ಸಾಮಾನ್ಯ ಸ್ಥಿತಿಗೆ ತಗ್ಗಿಸಲು ಸಹಾಯ ಮಾಡುತ್ತದೆ.

ಆಯುರ್ವೇದದಲ್ಲಿ ಮಧುಮೇಹಕ್ಕೆ ಚಿಕಿತ್ಸೆ ಇದೆಯೇ ?

ಮಧುಮೇಹ ರೋಗಿಯೊಬ್ಬರು ಆಯುರ್ವೇದ ವೈದ್ಯರಿಗೆ ಕೇಳುವ ಸಾಮಾನ್ಯ ಪ್ರಶ್ನೆ ಇದು. ಅನೇಕ ಮಧುಮೇಹ ರೋಗಿಗಳು ತಮ್ಮ ನಿಯಮಿತ ಔಷಧ ಸೇವನೆಯನ್ನು ಮಾಡುತ್ತಿದ್ದರೂ ತಮ್ಮ ಸಕ್ಕರೆಯ ಮಟ್ಟ ಹೆಚ್ಚಿದ್ದು ಹತೋಟಿಗೆ ಬರದೇ ಇರುವ ಸಂಧರ್ಭದಲ್ಲಿ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ಮಧುಮೇಹಕ್ಕೆ ಔಷಧಿಯನ್ನು ಕೇಳುತ್ತಾರೆ. ಕೆಲವರು ಮೊದಲ ಬಾರಿಗೆ ತಮಗೆ ಮಧುಮೇಹ ಬಂದಿದೆ ಎಂದು ಗೊತ್ತಾದಾಗ ಔಷಧಿಗಳನ್ನು ತೆಗೆದುಕೊಳ್ಳದೆ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಕೆಲವು ಪರ್ಯಾಯ ಪರಿಹಾರಗಳನ್ನು ಹುಡುಕುತ್ತಾರೆ, ಏಕೆಂದರೆ ಒಮ್ಮೆ ಔಷಧಿಗಳನ್ನು ಪ್ರಾರಂಭಿಸಿದರೆ ಜೀವಮಾನವಿಡೀ ಔಷಧಿಗಳನ್ನು ಮುಂದುವರಿಸಬೇಕಾಗುತ್ತದೆ ಎಂಬ ಭಯ. ಇನ್ನು ಕೆಲವರು ಆಯುರ್ವೇದ ಔಷಧಿಗಳನ್ನು ದೀರ್ಘಕಾಲ ಸೇವಿಸಿದರೂ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲವೆಂದು ಮಧುಮೇಹಕ್ಕೆ ಆಯುರ್ವೇದ ಔಷಧಿಗಳನ್ನು ಕೇಳುತ್ತಾರೆ. ದೈನಂದಿನ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುವ ಭಯವೂ ಮತ್ತು ದಿನನಿತ್ಯದ ಚುಚ್ಚುವಿಕೆಯನ್ನು ತಪ್ಪಿಸಲು ಆಯುರ್ವೇದ ಚಿಕಿತ್ಸೆಯ ಕಡೆಗೆ ಮುಖಮಾಡುತ್ತಾರೆ.

a diabetic measures blood sugar with a glucose meter, a diabetes concept, a drop of blood on his finger, a blood test

ಆಯುರ್ವೇದದಲ್ಲಿ ಮಧುಮೇಹದ ಬಗ್ಗೆ ಏನು ಹೇಳಿದ್ದಾರೆ?

ನಮಗೆಲ್ಲರಿಗೂ ತಿಳಿದಿರುವಂತೆಆಯುರ್ವೇದವು ಪ್ರಾಚೀನ ವೈದ್ಯಕೀಯ ವಿಜ್ಞಾನವಾಗಿದ್ದು ಅದು ಸುಮಾರು 5000 ವರ್ಷಗಳ ಹಿಂದಿನದು. ಆಯುರ್ವೇದದ ಮುಖ್ಯ ಪುಸ್ತಕಗಳಾದ ಚರಕ ಸಂಹಿತೆ, ಸುಶ್ರುತ ಸಂಹಿತೆ, ಅಷ್ಟಾಂಗ ಸಂಗ್ರಹ ಮುಂತಾದ ಪುಸ್ತಕಗಳಲ್ಲಿ ವಿವಿಧ ರೋಗಗಳನ್ನು ಅವುಗಳ ಕಾರಣ ಮತ್ತು ಚಿಕಿತ್ಸೆಯನ್ನು ಹೇಳಲಾಗಿದೆ. ಈ ರೋಗಗಳ ಗುಂಪಲ್ಲಿ ಪ್ರಮೇಹವೆನ್ನುವ ರೋಗದ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಪ್ರಮೇಹವು ಮೂತ್ರ ವಿಕಾರಗಳಿಗೆ ಸಂಬಂಧಿಸಿದ ತೊಂದರೆಯಾಗಿದ್ದು ಇದನ್ನು ಇಂದಿನ ಡಯಾಬಿಟಿಸ್ಗೆ ಹೋಲಿಸಬಹುದು. ಪ್ರಮೇಹವನ್ನು ಆಯುರ್ವೇದದಲ್ಲಿ ಚಿಕಿತ್ಸಿಸಲು ಕಷ್ಟಸಾಧ್ಯವಾದ ಎಂಟು ರೋಗಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಪ್ರಮೇಹ ಎಂಬ ಪದವು ಸಂಸ್ಕೃತ “ಮಿಹ್ – ಕ್ಷರನೆ” ನಿಂದ ಬಂದಿದೆ, ಇದರರ್ಥ ನೀರು/ಮೂತ್ರದ ಹೋಗುವಿಕೆ. “ಪ್ರ” ಎಂಬ ಪೂರ್ವಪ್ರತ್ಯಯವು ಆವರ್ತನ ಮತ್ತು ಪ್ರಮಾಣ ಎರಡರಲ್ಲೂ ಮಿತಿಮೀರಿದದ್ದನ್ನು ಸೂಚಿಸುತ್ತದೆ. ಆದ್ದರಿಂದ “ಪ್ರಮೇಹ” ಎಂಬ ಪದವು ಪ್ರಮಾಣ ಮತ್ತು ಆವರ್ತನದ ದೃಷ್ಟಿಯಿಂದ ಮೂತ್ರವನ್ನು ಅತಿಯಾಗಿ ಹೋಗುವುದನ್ನು ಸೂಚಿಸುತ್ತದೆ.

Read What Causes Diabetes?

ಪ್ರಮೇಹದ ಸಾಮಾನ್ಯ ಲಕ್ಷಣ

  • ಅತಿಯಾದ ಮೂತ್ರ ಹೋಗುವಿಕೆ
  • ಮೂತ್ರದ ಸಾಂದ್ರತೆಯ ಹೆಚ್ಚುವಿಕೆ

ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ, ಈ ಕೆಳಗಿನವು ಮಧುಮೇಹದ ಸಾಮಾನ್ಯ ಲಕ್ಷಣಗಳಾಗಿವೆ: 

  • ಆಗಾಗ್ಗೆ ಮೂತ್ರ ವಿಸರ್ಜನೆ ತುಂಬಾ ಬಾಯಾರಿಕೆಯ ಭಾವನೆ, ಅತಿಯಾದ ಹಸಿವು
  • ನೀವು ನಿಯಮಿತವಾಗಿ ತಿನ್ನುತ್ತಿದ್ದರೂ ಸಹ ತೀವ್ರ ಆಯಾಸ
  • ಮಸುಕಾದ ದೃಷ್ಟಿ
  • ನಿಧಾನವಾದ ಗಾಯಗಳ ಗುಣವಾಗುವಿಕೆ
  • ದೇಹದ ಭಾರ ಕಡಿಮೆಯಾಗುವಿಕೆ
  • ನೀವು ಹೆಚ್ಚು ತಿನ್ನುತ್ತಿದ್ದರೂ ಸಹ (ಟೈಪ್ 1) ಕೈ / ಕಾಲುಗಳಲ್ಲಿ ಜುಮ್ಮೆನಿಸುವಿಕೆ, ನೋವು ಅಥವಾ ಮರಗಟ್ಟುವಿಕೆ (ಟೈಪ್ 2)

ಈ ರೋಗಲಕ್ಷಣಗಳನ್ನು ನೋಡಿದರೆ ಡಯಾಬಿಟಿಸ್ ಮತ್ತು ಪ್ರಮೇಹ ನಡುವಿನ ಸಾಮ್ಯತೆಯನ್ನು ಕಾಣಬಹುದು ಮತ್ತು ಡೈಯಾಬಿಟಿಸನ್ನು ಪ್ರಮೇಹ ಸಂದರ್ಭದಲ್ಲಿ ವಿವರಿಸಿದ ರೋಗಲಕ್ಷಣಗಳ ಗುಂಪಿನಲ್ಲಿ ಒಂದು ಎಂದು ಪರಿಗಣಿಸಬಹುದು. 

ಮಧುಮೇಹದಲ್ಲಿ ಆಯುರ್ವೇದ ಔಷಧಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ? 

Ayurveda doshas Vata, Pitta, Kapha

ಆಯುರ್ವೇದದ ಪ್ರಕಾರ, ವಿಶ್ವದಲ್ಲಿನ ಎಲ್ಲಾ ವಸ್ತುಗಳು ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶ ಎಂಬ ಐದು ಮೂಲ ಧಾತುಗಳಿಂದ ರೂಪುಗೊಂಡಿರುತ್ತವೆ. ಇವುಗಳನ್ನು ಮಹಾಭೂತಗಳು ಅಥವಾ ಪಂಚ ಮಹಾಭೂತಗಳೆಂದು ಕರೆಯುತ್ತಾರೆ. ಮಾನವ ದೇಹವು ಈ ಪಂಚಮಹಾಭೂತಗಳಿಂದ ಮಾಡಲ್ಪಟ್ಟಿದೆ ಮತ್ತು ಪಂಚಮಹಾಭೂತಗಳ ಕಾರ್ಯಾತ್ಮಕವಾದ ಅಂಶಗಳನ್ನು ದೋಷಗಳೆಂದು (ವಾತ, ಪಿತ್ತ, ಕಫ) ಕರೆಯಲಾಗಿದೆ. ದೇಹದಲ್ಲಿನ ಆರೋಗ್ಯ ಮತ್ತು ಅನಾರೋಗ್ಯಕ್ಕೆ ತ್ರಿದೋಷಗಳ ಏರುಪೇರೆ ಕಾರಣ. ವಿವಿಧ ಕಾರಣಗಳಿಂದ ದೇಹದ ದೋಷಗಳಲ್ಲಿಯ ವ್ಯತ್ಯಾಸವು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಮತ್ತು ದೋಷಗಳ ಸಮತೋಲನವು ದೇಹದ ಆರೋಗ್ಯವನ್ನು ಕಾಪಾಡುತ್ತದೆ.  ವಾತ ಪಿತ್ತ ಕಫಗಳೆಂಬ ತ್ರಿದೋಷಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವುದರಲ್ಲಿ ಮಹತ್ತರವಾದ ಪಾತ್ರವಹಿಸುತ್ತವೆ. ದೇಹದ ಪ್ರತಿಯೊಂದು ದೋಷವೂ ಪಂಚಮಹಾ ಭೂತಗಳಿಂದ ಕೂಡಿದ್ದು, ಈ ಕೆಳಗಿನ ವರ್ಗೀಕರಣದಂತೆ ವಿವಿಧ ಮಹಾಭೂತಗಳ ಪ್ರಾಧಾನ್ಯದಿಂದ ಪ್ರತ್ಯೇಕಿಸಲ್ಪಟ್ಟಿದೆ. 

  1. ವಾತ ದೋಷ – ಆಕಾಶ ಮತ್ತು ವಾಯು ಮಹಾಭೂತಗಳ ಪ್ರಾಧಾನ್ಯತೆ
  2. ಪಿತ್ತ ದೋಷ – ಅಗ್ನಿ ಮತ್ತು ಜಲ ಮಹಾಭೂತಗಳ ಪ್ರಾಧಾನ್ಯತೆ 
  3. ಕಫ ದೋಷ – ಭೂಮಿ ಮತ್ತು ಜಲ ಮಹಾಭೂತಗಳ ಪ್ರಾಧಾನ್ಯತೆ

ಆಯುರ್ವೇದದಲ್ಲಿ ಸಕ್ಕರೆ ಕಾಯಿಲೆಯ (ಪ್ರಮೇಹ) ವಿವರಣೆ ಮತ್ತು ವರ್ಗೀಕರಣ

Classification of Prameha

ಆಯುರ್ವೇದ ಸಂಹಿತೆಗಳಲ್ಲಿ ದೋಷದ ಪ್ರಾಬಲ್ಯವನ್ನು ಅವಲಂಬಿಸಿ 20 ಬಗೆಯ ಪ್ರಮೇಹಗಳನ್ನು ವಿವರಿಸಲಾಗಿದೆ. ಈ ಇಪ್ಪತ್ತು ಬಗೆಯ ಪ್ರಮೇಹಗಳ ರೋಗ ಲಕ್ಷಣಗಳು ಸಹ ಪರಸ್ಪರ ಭಿನ್ನವಾಗಿರುತ್ತವೆ.

ಆಯುರ್ವೇದದ ಪ್ರಮೇಹ ಚಿಕಿತ್ಸೆಯು ವಿವಿಧ ಔಷಧಿಗಳು, ಪಂಚಕರ್ಮಗಳಂತಹ ದೇಹ ಶುದ್ಧೀಕರಣ ಚಿಕಿತ್ಸೆ, ಸೂಕ್ತವಾದ ಆಹಾರಕ್ರಮಗಳು, ಜೀವನಶೈಲಿಯ ಮಾರ್ಪಾಡು ಇತ್ಯಾದಿಗಳನ್ನು ಒಳಗೊಂಡಿದೆ. ಪ್ರಪಂಚದ ಎಲ್ಲಾ ವಸ್ತುಗಳು ಆಕಾಶ, ವಾಯು, ಅಗ್ನಿ, ಜಲ, ಮತ್ತು ಪೃಥ್ವಿ ಎಂಬ ಪಂಚಮಹಭೂತಗಳಿಂದ ರಚಿಸಲ್ಪಟ್ಟಿವೆ.

ಇವುಗಳ ಕಾರ್ಯಾತ್ಮಕವಾದ ಸಂಯೋಜನೆಯಲ್ಲಿ ಮೂರು ವಿಧದ ದೋಷಗಳಾದ ವಾತ, ಪಿತ್ತ ಮತ್ತು ಕಫಗಳ ರಚನೆಯಾಗಿ ಇವುಗಳ ಏರುಪೇರಿನಿಂದ ದೇಹದಲ್ಲಿ ರೋಗದ ಉತ್ಪನ್ನವಾಗುತ್ತದೆ. ಮಧುಮೇಹವು ಕಫ ದೋಷದ ತೊಂದರೆಯಿಂದ ಉಂಟಾಗುವ ಒಂದು ರೋಗವಾಗಿದೆ. ಇಲ್ಲಿ ಪಂಚಮಹಾಭೂತಗಳಾದ ಜಲ ಮತ್ತು ಭೂಮಿ ತತ್ವದ ವ್ಯತ್ಯಾಸದಿಂದ ಪ್ರಮೇಹ ರೋಗದುತ್ಪತ್ತಿಯಾಗುತ್ತದೆ.

ದೋಷಗಳು ದೇಹದಲ್ಲಿ ಹೆಚ್ಚಾಗಿ ದೇಹದ ಧಾತುಗಳಾದ ಮೇದಸ್, ರಕ್ತ, ಶುಕ್ರ, ಅಂಬು, ಮಜ್ಜೆ, ಮಾಂಸಗಳನ್ನು ಕೆಡಿಸಿ ಇಪ್ಪತ್ತು ಬಗೆಯ ಪ್ರಮೇಹಗಳಿಗೆ ಕಾರಣವಾಗುತ್ತದೆ. ದೇಹದಲ್ಲಿ ಹೆಚ್ಚಾದ ದೋಷಗಳು ಮೂತ್ರವಾಹಕಗಳಲ್ಲಿ ಪ್ರವೇಶಿಸಿ ದೋಷ ಪ್ರಾಧಾನ್ಯತೆಗಳಿಗೆ ಅನುಗುಣವಾಗಿ ವಿವಿಧ ರೀತಿಯ ಪ್ರಮೇಹಗಳನ್ನು ಉಂಟುಮಾಡುತ್ತದೆ

ಪ್ರಮೇಹವನ್ನು ಸಾಮಾನ್ಯವಾಗಿ ಮೂತ್ರದ ವೈಪರೀತ್ಯವೆಂದು ಪರಿಗಣಿಸಬಹುದು. ಆಯುರ್ವೇದದಲ್ಲಿ ಕಫ ದೋಷ ಪ್ರಾಧಾನ್ಯತೆಯಿಂದ ಉಂಟಾಗುವ ೧೦ ವಿಧದ ಪ್ರಮೇಹವನ್ನು ಸಂಪೂರ್ಣವಾಗಿ ವಾಸಿಮಾಡಬಹುದೆಂದು ಹೇಳಿದ್ದಾರೆ. ಅದೇ ರೀತಿ ಪಿತ್ತ ಪ್ರಾಧಾನ್ಯತೆಯಿಂದ ಬರುವ ೬ ಬಗೆಯ ಪ್ರಮೇಹಗಳನ್ನು ಸಂಪೂರ್ಣವಾಗಿ ಹತೋಟಿಯಲ್ಲಿಡಬಹುದೆಂದು ಮತ್ತು ವಾತ ದೋಷದ ಪ್ರಾಧಾನ್ಯತೆಯಿಂದ ಉಂಟಾಗುವ ೪ ವಿಧದ ಪ್ರಮೇಹಗಳಿಗೆ ಚಿಕಿತ್ಸೆ ನೀಡುತ್ತಾ ನಿರ್ವಹಿಸಬಹುದೇ ಹೊರತು ಸಂಪೂರ್ಣ ವಾಸಿ ಸಾಧ್ಯವಾಗದು ಎಂದು ತಿಳಿಸಿದ್ದಾರೆ.

ಪ್ರಮೇಹದ ಭೇದಗಳನ್ನು ಮೂತ್ರದ ಬಣ್ಣ, ರುಚಿ, ಸ್ಪರ್ಶ ಮತ್ತು ವಾಸನೆಯ ಆಧಾರದ ಮೇಲೆ ವಿಂಗಡಿಸಲಾಗಿದೆ. ವಿವಿಧ ದೋಷ ಪ್ರಾಧಾನ್ಯತೆಗಳಿಗನುಗುಣವಾಗಿ ಮೂತ್ರದ ಬಣ್ಣ, ರುಚಿ, ಸ್ಪರ್ಶ ಹಾಗು ವಾಸನೆಯು ಬದಲಾಗುತ್ತವೆ. ಉದಾಹರಣೆಗೆ ಕಫ ದೋಷ ಪ್ರಧಾನತೆಯುಳ್ಳ ಪ್ರಮೇಹದಲ್ಲಿ ಮೂತ್ರವು ಬಿಳಿಯ ಬಣ್ಣ ಹೊಂದಿದ್ದು ರುಚಿಯಲ್ಲಿ ಮಧುರ, ಸ್ಪರ್ಶಕ್ಕೆ ತಂಪಾಗಿದ್ದು ಮಾಂಸದ ವಾಸನೆಯಿಂದ ಕೂಡಿರುತ್ತದೆ. ಅದೇ ರೀತಿ ಪಿತ್ತಜ ಪ್ರಮೇಹದಲ್ಲೂ ಇಂತಹ ಲಕ್ಷಣಗಳು ಕಂಡುಬರುತ್ತದೆ. ವಾತದೋಷವು ಬಣ್ಣ ರಹಿತವಾಗಿದ್ದು ವಾತ ಪ್ರಾಧಾನ್ಯವಿರುವ ಪ್ರಮೇಹದಲ್ಲಿ ಮೂತ್ರವು ಬೂದು ಅಥವಾ ಕೆಂಪು ಬಣ್ಣದಿಂದ ಕೂಡಿರುತ್ತದೆ.

ಪ್ರಮೇಹದ ಆರಂಭಿಕ ಲಕ್ಷಣಗಳು

ವಾತ, ಪಿತ್ತ ಹಾಗು ಕಫ ದೋಷಗಳು ಕೂಡಿಕೊಂಡು ಪ್ರಮೇಹವನ್ನು ಉಂಟುಮಾಡುವ ಮಾರ್ಗದಲ್ಲಿ ಈ ಕೆಳಗಿನ ರೋಗದ ಆರಂಭಿಕ ಲಕ್ಷಣಗಳನ್ನು ತೋರಿಸುತ್ತದೆ ಎಂದು ಚರಕಾಚಾರ್ಯರು ಹೇಳಿದ್ದಾರೆ.

  • ತಲೆಯ ಕೂದಲಲ್ಲಿ ಸಿಕ್ಕು ಹೆಚ್ಚುವಿಕೆ
  • ಬಾಯಲ್ಲಿ ಮಧುರತೆಯ ಅನುಭವ
  • ಕೈ ಮತ್ತು ಕಾಲಿನಲ್ಲಿ ಉರಿ ಹಾಗು ಜೋಮಿನ ಅನುಭವ
  • ಬಾಯಿ ಹಾಗು ಗಂಟಲು ಒಣಗಿದ ಅನುಭವ
  • ಹೆಚ್ಚಾದ ಬಾಯಾರಿಕೆ
  • ದೇಹಾಲಸ್ಯ
  • ದೇಹದಲ್ಲಿ ಮಲಾಂಶಗಳ ಹೆಚ್ಚುವಿಕೆ
  • ಸ್ರೋತಸ್ಸಿನಲ್ಲಿ ಮಲಗಳ ಅಂಟುವಿಕೆ
  • ದೇಹದ ವಿವಿಧ ಭಾಗಗಳಲ್ಲಿ ಉರಿಯ ಅನುಭವ
  • ದೇಹದ ವಿವಿಧ ಭಾಗಗಳ ಜೋಮುಹಿಡಿಯುವಿಕೆ
  • ಮೂತ್ರದತ್ತ ಇರುವೆ ಹಾಗು ಇನ್ನಿತರ ಕೀಟಗಳ ಆಕರ್ಷಣೆ
  • ಮೂತ್ರದ ಅಸಹಜತೆ
  • ಮೂತ್ರದ ವಾಸನೆಯು ಹಸಿಯಾದ ಮಾಂಸದ ವಾಸನೆಯಂತಿರುತ್ತದೆ
  • ಅತಿನಿದ್ರೆ ಹಾಗು ದಿನವಿಡೀ ನಿದ್ರಾಸಕ್ತಿ.

ಪ್ರಮೇಹದ ವಿಧಗಳು

ಕಫ ದೋಷ ಪ್ರಾಧಾನ್ಯತೆಯಿಂದ ಉಂಟಾಗುವ ಪ್ರಮೇಹಭೇದಗಳು ಒಟ್ಟು ಹತ್ತು ಅವುಗಳೆಂದರೆ

  1. ಉದಕಮೇಹ – ಇದರಲ್ಲಿ ವ್ಯಕ್ತಿಯ ಮೂತ್ರವು ಹೆಚ್ಚಿನ ಪ್ರಮಾಣದಲ್ಲಿ ನೀರಿನಂತಹ, ಪಾರದರ್ಶಕ, ಬಿಳಿ, ಶೀತ ಮತ್ತು ಯಾವುದೇ ವಾಸನೆಯಿಲ್ಲದೆ ಇರುತ್ತದೆ .
  2. ಇಕ್ಷು ಮೇಹ – ಇದರಲ್ಲಿ ರೋಗಿಯ ಮೂತ್ರವು ಕಬ್ಬಿನ ರಸವನ್ನು ಹೋಲುವ ಹಾಗಿದ್ದು , ಅದು ಹೆಚ್ಚು ಸಿಹಿ, ಶೀತ, ಸ್ವಲ್ಪ ಲವಣಯುಕ್ತ ಮತ್ತು ಅಪಾರದರ್ಶಕವಾಗಿರುತ್ತದೆ.
  3. ಸಾಂದ್ರ ಮೇಹ – ಇದರಲ್ಲಿ ಮೂತ್ರವನ್ನು ರಾತ್ರಿಯಿಡಿ ಇರಿಸಿದಾಗ ವ್ಯಕ್ತಿಯ ಮೂತ್ರದ ಸಾಂದ್ರತೆ ಹೆಚ್ಚಾಗುತ್ತದೆ.
  4. ಸಾಂದ್ರಪ್ರಸಾದ ಮೇಹ – ಇದರಲ್ಲಿ ರೋಗಿಯ ಮೂತ್ರವನ್ನು ರಾತ್ರಿಯಿಡೀ ಇರಿಸಿದಾಗ ಭಾಗಶಃ ಸ್ಪಷ್ಟವಾಗಿ ಕಂಡು ಉಳಿದ ಭಾಗದಲ್ಲಿ ಸಾಂದ್ರತೆಯು ಕಾಣಿಸಿಕೊಳ್ಳುತ್ತದೆ.
  5. ಶುಕ್ಲಮೇಹ – ಮೂತ್ರವು ಹಿಟ್ಟಿನಂತೆ ಬೆಳ್ಳಗಾಗಿಯೂ ಹೆಚ್ಚಾಗಿ ಹೋಗುತ್ತದೆ
  6. ಶುಕ್ರಮೇಹ – ಇದರಲ್ಲಿ ರೋಗಿಯು ವೀರ್ಯದಂತಹ ಮೂತ್ರ ಅಥವಾ ವೀರ್ಯವನ್ನೊಳಗೊಂಡ ಮೂತ್ರವನ್ನು ವಿಸರ್ಜಿಸುತ್ತಾನೆ
  7. ಶೀತಮೇಹ – ಇದರಲ್ಲಿ ಮೂತ್ರವು ಅತಿ ಶೀತವಾಗಿರುವುದಲ್ಲದೆ ಸಿಹಿಯಾಗಿದ್ದು ಹೆಚ್ಚು ಹೋಗುತ್ತದೆ
  8. ಸಿಕತಾ ಮೇಹ – ಇದರಲ್ಲಿ ಮೂತ್ರವು ಮರಳಿನ ಹಾಗಿರುವ ಕಾಳುಗಳಿಂದ ಕೂಡಿರುತ್ತದೆ
  9. ಶನೈರ್ಮೇಹ – ರೋಗಿಯು ಅಲ್ಪಾಲ್ಪ ಪ್ರಮಾಣದಲ್ಲಿ ಮೂತ್ರವನ್ನು ಕಷ್ಟದಿಂದ ಮತ್ತು ನಿಧಾನವಾಗಿ ವಿಸರ್ಜಿಸುತ್ತಾನೆ.
  10. ಲಾಲಾಮೇಹ – ಇದರಲ್ಲಿ ಮೂತ್ರವು ಕಫದಂತೆಯೇ ಮತ್ತು ತೆಳ್ಳಗೆ ಎಳೆಗಳಿಂದ ತುಂಬಿರುವಂತೆ ಕಾಣುತ್ತದೆ.

ಪಿತ್ತ ದೋಷದ ಪ್ರಧಾನತೆಯಿಂದ ಉಂಟಾಗುವ ಪ್ರಮೇಹಭೇದಗಳು ಒಟ್ಟು ಆರು ಅವುಗಳೆಂದರೆ,

  1. ಕ್ಷಾರಮೇಹ – ರೋಗಿಯು ಕ್ಷಾರಗಳಂತೆಯೇ ವಾಸನೆ, ಬಣ್ಣ, ರುಚಿ ಮತ್ತು ಸ್ಪರ್ಶವನ್ನು ಹೊಂದಿರುವ ಮೂತ್ರವನ್ನು ವಿಸರ್ಜಿಸುತ್ತಾನೆ.
  2. ಕಾಲ ಮೇಹ – ಇದರಲ್ಲಿ ರೋಗಿಯು ದೊಡ್ಡ ಪ್ರಮಾಣದಲ್ಲಿ ಕಪ್ಪು ಅಥವಾ ಗಾಢವಾದ ಮೂತ್ರವನ್ನು ವಿಸರ್ಜಿಸುತ್ತಾನೆ.
  3. ನೀಲಾ ಮೇಹ – ಇದರಲ್ಲಿ ರೋಗಿಯು ನೀಲಿ ಜೇ ಹಕ್ಕಿಯ ಗರಿಗಳಂತೆ ಬಣ್ಣವನ್ನು ಮತ್ತು ಹುಳಿ ರುಚಿ ಹೊಂದಿರುವ ಮೂತ್ರವನ್ನು ವಿಸರ್ಜಿಸುತ್ತಾನೆ.
  4. ರಕ್ತ ಮೇಹ – ಇದರಲ್ಲಿ ರೋಗಿಯು ಕೆಂಪು ಬಣ್ಣ, ಲವಣಯುಕ್ತ ರುಚಿ ಮತ್ತು ಹಸಿಯ ಮೀನಿನಂತೆ ವಾಸನೆಯನ್ನು ಹೊಂದಿರುವ ಮೂತ್ರವನ್ನು ವಿಸರ್ಜಿಸುತ್ತಾನೆ.
  5. ಮಂಜಿಷ್ಠ ಮೇಹ – ಇದರಲ್ಲಿ ರೋಗಿಯು ಆಗಾಗ್ಗೆ ಮೂತ್ರವನ್ನು ವಿಸರ್ಜಿಸುತ್ತಾನೆ, ಮತ್ತು ಮೂತ್ರವು ಕಚ್ಚಾ ಮಾಂಸದಂತೆ ವಾಸನೆಯಿಂದ ಕೂಡಿದ್ದು ಮಂಜಿಷ್ಠದ ಕಷಾಯದ ರೂಪವನ್ನು ಹೋಲುತ್ತದೆ.
  6. ಹರಿದ್ರ ಮೇಹ – ರೋಗಿಯು ಅರಶಿನದ ರಸದಂತೆ ತೀವ್ರವಾದ ರುಚಿ ಮತ್ತು ಬಣ್ಣವನ್ನು ಹೊಂದಿರುವ ಮೂತ್ರವನ್ನು ವಿಸರ್ಜಿಸುತ್ತಾನೆ.


ವಾತ ದೋಷದ ಪ್ರಧಾನತೆಯಿಂದ ಉಂಟಾಗುವ ಪ್ರಮೇಹಭೇದಗಳು ಒಟ್ಟು ನಾಲ್ಕು ಅವುಗಳೆಂದರೆ

  1. ವಸಾ ಮೇಹ – ಇದರಲ್ಲಿ ರೋಗಿಯು ಆಗಾಗ್ಗೆ ವಸೆಯಿಂದ ಕೂಡಿದ ಅಥವಾ ವಸೆಯ ರೂಪವನ್ನು ಹೊಂದಿರುವ ಮೂತ್ರವನ್ನು ವಿಸರ್ಜಿಸುತ್ತಾನೆ. ಇದು ಗುಣಪಡಿಸಲಾಗದ ತೊಂದರೆಯಾಗಿದ್ದು ವಾತ ದೋಷದ ಹೆಚ್ಚುವಿಕೆಯಿಂದ ಉಂಟಾಗುತ್ತದೆ.
  2. ಮಜ್ಜ ಮೇಹ – ಇದರಲ್ಲಿ ರೋಗಿಯು ಆಗಾಗ್ಗೆ ಮಜ್ಜೆಯೊಂದಿಗೆ ಕೂಡಿದ ಅಥವಾ ಮಜ್ಜೆಯಂತೆ ಕಾಣುವ ಮೂತ್ರವನ್ನು ವಿಸರ್ಜಿಸುತ್ತಾನೆ. ಇದು ಕೂಡ ಗುಣಪಡಿಸಲಾಗದ ತೊಂದರೆಯಾಗಿದ್ದು ವಾತ ದೋಷದ ಹೆಚ್ಚುವಿಕೆಯಿಂದ ಉಂಟಾಗುತ್ತದೆ.
  3. ಹಸ್ತಿ ಮೇಹ – ಇದರಲ್ಲಿ ರೋಗಿಯು ಮೊದಲೇ ಹೇಳಿದಂತೆ ಆಗಾಗ್ಗೆ ಆನೆಯಂತೆ ದೊಡ್ಡ ಪ್ರಮಾಣದಲ್ಲಿ ಮೂತ್ರವನ್ನು ವಿಸರ್ಜಿಸುತ್ತಾನೆ. ಇದು ವಾತ ದೋಷದಿಂದ ಉಂಟಾಗಿ ಗುಣಪಡಿಸಲಾಗದು.
  4. ಮಧುಮೇಹ – ಇಲ್ಲಿ ರೋಗಿಯ ಮೂತ್ರವು ಸಿಹಿ ಮತ್ತು ಕಷಾಯ ರುಚಿಯಿಂದ ಕೂಡಿದ್ದು ಗುಣದಲ್ಲಿ ರೂಕ್ಷತೆಯನ್ನು, ಬಣ್ಣದಲ್ಲಿ ಪಾಂಡುವರ್ಣವಾಗಿ ಕಾಣುತ್ತದೆ.


ಮಧುಮೇಹ ಎಂದರೆ “ಸಿಹಿ ಮೂತ್ರ” ರೋಗ. ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಾದಾಗ, ಅದು ಮೂತ್ರದೊಂದಿಗೆ ಬೆರೆತು ಹೊರಬರುತ್ತದೆ. ಇದನ್ನು ಮೂತ್ರ ಪರೀಕ್ಷೆಯ ಮೂಲಕ ತಿಳಿಯಬಹುದು. ಇದು ದೇಹದಲ್ಲಿನ ಚಯಾಪಚಯ ಕ್ರಿಯೆಯಲ್ಲಿನ ಏರುಪೇರಿಂದ ಉಂಟಾಗುವ ಒಂದು ಸ್ಥಿತಿಯಾಗಿದ್ದು ಇದನ್ನು “ಧಾತು ಪಾಕ ಜನ್ಯ ವಿಕೃತಿ” ಎಂದು ಕರೆಯಲಾಗುತ್ತದೆ, ಇದಕ್ಕೆ ಮುಖ್ಯ ಕಾರಣ ನಮ್ಮ ಜೀರ್ಣ ಶಕ್ತಿಯ ಕುಂದುವಿದೆ.

ಕಾರಣಗಳ ಆಧಾರದ ಮೇಲೆ, ಆಚಾರ್ಯ ಸುಶ್ರುತ ಅವರು ಎರಡು ರೀತಿಯ ಪ್ರಮೇಹಗಳನ್ನು ಉಲ್ಲೇಖಿಸಿದ್ದಾರೆ

  1. ಸಹಜ ಪ್ರಮೇಹ (ಆನುವಂಶಿಕ)
  2. ಅಪಥ್ಯ ನಿಮಿತ್ತಜ ಪ್ರಮೇಹ (ಅಹಿತ ಆಹಾರದಿಂದ ಹುಟ್ಟುವಂತದ್ದು)

ಸಹಜಾ ಪ್ರಮೇಹವು ಹುಟ್ಟಿನಿಂದಲೇ ಇರುತ್ತದೆ. ಇದು ತಂದೆ ತಾಯಿಯರ ಬೀಜ ದೋಷಗಳ (ಆನುವಂಶಿಕ ಮೂಲ) ಪರಿಣಾಮವಾಗಿ ಸಂಭವಿಸುತ್ತದೆ. ಆಚಾರ್ಯ ಚರಕರು ಇದನ್ನು ಜಾತ ಪ್ರಮೇಹಿ ಎಂದು ಉಲ್ಲೇಖಿಸಿದ್ದಾರೆ ಮತ್ತು ಇದನ್ನು ಸಂಪೂರ್ಣ ವಾಸಿಯಾಗದಂತಹ ರೋಗವೆಂದು ತಿಳಿಸಿದ್ದಾರೆ. ಅನುಚಿತ ಆಹಾರಗಳ ಸೇವನೆ, ಜೀವನಶೈಲಿಯಿಂದ ಉಂಟಾಗುವ ಪ್ರಮೇಹವನ್ನು ಅಪಥ್ಯನಿಮಿತ್ತಜ ಪ್ರಮೇಹವೆಂದು ಕರೆಯುತ್ತಾರೆ.

ಲಕ್ಷಣಗಳು

ಸಹಜ ಪ್ರಮೇಹದಿಂದ ಪೀಡಿತನಾದವನು ಕೃಶನಾಗಿಯೂ, ರೂಕ್ಷನಾಗಿಯೂ, ಅಲ್ಪಾಹಾರ ಸೇವಿಸುವವನಾಗಿಯೂ, ಹೆಚ್ಚು ಬಾಯಾರಿಕೆಯುಳ್ಳವನಾಗಿಯೂ, ಹೆಚ್ಚು ತಿರುಗಾಡುವ ಅಭ್ಯಾಸವನ್ನು ಹೊಂದಿರುತ್ತಾನೆ.

ಅಪಥ್ಯ ನಿಮಿತ್ತಜ ಪ್ರಮೇಹದಿಂದ ಪೀಡಿತನಾಗಿರುವವನು ಸ್ಥೂಲನಾಗಿದ್ದು, ಹೆಚ್ಚು ಆಹಾರ ಸೇವಿಸುವವನಾಗಿ, ಸ್ನಿಗ್ಧನಾಗಿ, ಹೆಚ್ಚಾಗಿ ಮಲಗುವುದರಲ್ಲಿಯೂ, ಕುಳಿತುಕೊಳ್ಳುವುದರಲ್ಲಿಯೂ, ನಿದ್ರೆಮಾಡುವುದರಲ್ಲಿ ಇಷ್ಟವುಳ್ಳವನಾಗಿರುತ್ತಾನೆ.

ಚಿಕಿತ್ಸೆಯ ಆಧಾರದ ಮೇಲೆ ಪ್ರಮೇಹದ ಭೇದಗಳು

  1. ಸಾಧ್ಯ ಪ್ರಮೇಹ – ಕಫಜ ಪ್ರಮೇಹ, ಸ್ಥೂಲ ಪ್ರಮೇಹ ಮತ್ತು ಅಪಥ್ಯ ನಿಮಿತ್ತಜ ಪ್ರಮೇಹಗಳು ಸಂಪೂರ್ಣವಾಗಿ ಗುಣವಾಗಬಲ್ಲವು.
  2. ಯಾಪ್ಯ ಪ್ರಮೇಹ – ಪಿತ್ತದ ಪ್ರಮೇಹಗಳನ್ನು ಚಿಕಿತ್ಸೆಯಿಂದ ನಿಯಂತ್ರಿಸಬಹುದು ಆದರೆ ಸಂಪೂರ್ಣ ಗುಣಮುಖ ಕಷ್ಟಸಾಧ್ಯ.
  3. ಅಸಾಧ್ಯ ಪ್ರಮೇಹ – ವಾತದ ಪ್ರಮೇಹ ಮತ್ತು ಹುಟ್ಟಿನಿಂದಿರುವ ಪ್ರಮೇಹಗಳನ್ನು ಸಂಪೂರ್ಣವಾಗಿ ಗುಣಪಡಿಸಲು ಅಸಾಧ್ಯವೆಂದು ಹೇಳಿದ್ದಾರೆ.

ಮಧುಮೇಹ

ಮಧುಮೇಹವು ವಾತದ ಪ್ರಮೇಹಗಳಲ್ಲಿ ಒಂದು. ಇದನ್ನು ಆಚಾರ್ಯ ಸುಶ್ರುತರು ಕ್ಷೌದ್ರಮೇಹ ಎಂದು ಕರೆದಿದ್ದಾರೆ. ಮಧು ಅಥವಾ ಕ್ಷೌದ್ರ ಎಂಬುದು ಜೇನಿನ ಪರ್ಯಾಯ ಪದಗಳಾಗಿವೆ. ಆಚಾರ್ಯ ಸುಶ್ರುತರು ಮಧುಮೇಹವನ್ನು ಪ್ರಮೇಹದ ಮುಂದುವರಿದ ಹಂತವೆಂದು ಪರಿಗಣಿಸಿ, ಮಧುಮೇಹವನ್ನು ಪ್ರತ್ಯೇಕವಾಗಿ ವಿವರಿಸಿದ್ದಾರೆ. ಮಧುಮೇಹದಲ್ಲಿ, ಮೂತ್ರದ ಬಣ್ಣ ಮತ್ತು ರುಚಿ ಮಧು ಅಥವಾ ಜೇನಿನಂತೆ ಕಾಣಿಸಿಕೊಂಡು ಮೂತ್ರದಲ್ಲಿನ ಸಿಹಿಯನ್ನು ಸೂಚಿಸುತ್ತದೆ.

ಪ್ರಮೇಹಕ್ಕೆ ಸರಿಯಾದ ಚಿಕಿತ್ಸೆ ನೀಡದಿದ್ದಲ್ಲಿ  ಅಥವಾ ಚಿಕಿತ್ಸೆ ನೀಡಲು ವಿಳಂಬಿಸಿದಲ್ಲಿ ಅದು ಮುಂದುವರೆದು ಮಧುಮೇಹಕ್ಕೆ ಕಾರಣವಾಗುತ್ತದೆ.

ಮಧುಮೇಹದ  ವರ್ಗೀಕರಣ

ವಿವಿಧ ಪಠ್ಯಗಳ ಪ್ರಕಾರ, ಮಧುಮೇಹವನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ

  1. ಅವೃತಜನ್ಯ ಮಧುಮೇಹ
  2. ಧಾತುಕ್ಷಯಜನ್ಯ ಮಧುಮೇಹ

ಕಫ ಮತ್ತು ಪಿತ್ತ ದೋಷಗಳು ವಾತ ದೋಷವನ್ನು ಆವರಿಸಿಕೊಂಡಾಗ ಆವೃತಜನ್ಯ ಮಧುಮೇಹ ಉಂಟಾಗುತ್ತದೆ.
ವಾತ ದೋಷದ ವೃದ್ಧಿಯಿಂದ ದೇಹದ ಧಾತುಗಳು ಕ್ಷೀಣಗೊಂಡು ಧಾತುಕ್ಷಯಜನ್ಯವೆಂಬ ಮಧುಮೇಹವನ್ನು ಉಂಟುಮಾಡುತ್ತದೆ.

ಪ್ರಮೇಹ ಹೇಗೆ ಪ್ರಾರಂಭವಾಗುತ್ತದೆ ? – ಆಯುರ್ವೇದದ ವಿವರಣೆ.

Pathogenesis of Prameha

ಪ್ರಮೇಹಕ್ಕೆ ಕಾರಣಗಳು

ಹಗಲು ನಿದ್ರೆ, ವ್ಯಾಯಾಮವಿಲ್ಲದಿರುವಿಕೆ, ಆಲಸ್ಯದ ಜೀವನ ಶೈಲಿ, ಶೀತಲ, ಸ್ನಿಗ್ಧ, ಸಿಹಿ ಮತ್ತು ಮೇದವನ್ನು ಹೆಚ್ಚಿಸುವಂತ ಅನ್ನ ಪಾನಗಳು ಪ್ರಮೇಹಕ್ಕೆ ಮೂಲ ಕಾರಣಗಳಾಗಿವೆ. ಹೆಚ್ಚು ಸಿಹಿ, ಹುಳಿ, ಉಪ್ಪು, ಕೊಬ್ಬಿನ ಆಹಾರ ಮತ್ತು ಪಾನೀಯಗಳ ಸೇವನೆ, ಜೀರ್ಣಕ್ರಿಯೆಗೆ ಭಾರವಾದ ಆಹಾರ ಸೇವನೆ, ತೆಳ್ಳಗೆ, ಶೀತ, ಹೊಸದಾಗಿ ಕೊಯ್ಲು ಮಾಡಿದ ಧಾನ್ಯಗಳ ಬಳಕೆ, ಹೊಸ ಮದ್ಯ, ಜವುಗು ಸ್ಥಳಗಳಲ್ಲಿ ಬೆಳೆದ ಪ್ರಾಣಿಗಳ  ಮಾಂಸವನ್ನು ಸೇವಿಸುವುದು, ಕಬ್ಬಿನ ರಸ, ಬೆಲ್ಲ, ಹಾಲು, ಹೆಚ್ಚು ಸಮಯದವರೆಗೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು, ಅಕಾಲಿಕವಾಗಿ ಮತ್ತು  ಅತಿಯಾಗಿ ಮಲಗುವುದು ಇತ್ಯಾದಿ… ದೇಹದಲ್ಲಿ ಕಫ ದೋಷವನ್ನು ಹೆಚ್ಚಿಸಿ ಪ್ರಮೇಹಕ್ಕೆ ಕಾರಣವಾಗುತ್ತದೆ.

ಪ್ರಮೇಹ ರೋಗದ ಬೆಳವಣಿಗೆ

ಪ್ರಮೇಹದಲ್ಲಿ ಕಫ ಪಿತ್ತ ವಾಯು ದೋಷಗಳು ಮೇದಸ್ಸು, ರಕ್ತ, ಶುಕ್ರ, ಶರೀರದೊಳಗಿರುವ ನೀರು, ವಸೆ, ಮಜ್ಜೆ, ರಸ , ಓಜಸ್, ಮಾಂಸಗಳನ್ನು ಕೆಡಿಸಿ ಪ್ರಮೇಹವನ್ನು ಹುಟ್ಟಿಸುತ್ತದೆ. ವಿಕೃತಗೊಂಡ ಪಿತ್ತ ದೋಷವೂ ಸಹ ಧಾತುಗಳನ್ನು ಕೆಡಿಸಿ ಪ್ರಮೇಹಕ್ಕೆ ಕಾರಣವಾಗುತ್ತದೆ.

ಪಿತ್ತ ಕಫ ದೋಷಗಳು ಕ್ಷೀಣವಾಗಿ ವಾತವು ಬಲವಾದಾಗ ವಾತವು ಧಾತುಗಳನ್ನು ಮೂತ್ರಾಶಯಕ್ಕೆ ದೂಡಿ ಪ್ರಮೇಹವನ್ನುಂಟುಮಾಡುತ್ತದೆ.

ಎಲ್ಲಾ ಪ್ರಮೇಹಗಳಲ್ಲಿಯೂ ದೋಷವು ಮೂತ್ರಾಶಯಕ್ಕೆ ಬಂದು ಮೂತ್ರವನ್ನು ಕೆಡಿಸಿ ವಿವಿಧ ಪ್ರಮೇಹಗಳಿಗೆ ಕಾರಣವಾಗುತ್ತವೆ.

ಕಫದಿಂದ ಉಂಟಾಗುವ ಹತ್ತು ಪ್ರಮೇಹಗಳು ಸಾಧ್ಯ, ಪಿತ್ತದಿಂದ ಹುಟ್ಟುವ ಆರು ಪ್ರಮೇಹಗಳು ಕಷ್ಟ ಸಾಧ್ಯ ಹಾಗು ವಾತದಿಂದ ಉಂಟಾಗುವ ನಾಲ್ಕು ಪ್ರಮೇಹಗಳು ಅಸಾಧ್ಯವೆಂದು ಹೇಳಿದ್ದಾರೆ.

ಕಫದಲ್ಲಿ ದೋಷಕ್ಕೂ ದೂಷ್ಯಕ್ಕೂ ಪ್ರತಿಕ್ರಿಯೆ ಸಮಾನವಾದ್ದರಿಂದ ಚಿಕಿತ್ಸೆಯು ಸುಲಭ ಸಾಧ್ಯ, ಪಿತ್ತದಲ್ಲಿ ಅವು ಪರಸ್ಪರ ವಿರುದ್ಧವಿರುವುದರಿಂದ ಕಷ್ಟಸಾಧ್ಯ ಮತ್ತು ವಾತದಲ್ಲಿ ಅವುಗಳ ಭಿನ್ನತೆ ಹಾಗು ತೀವ್ರತೆಯ ಕಾರಣದಿಂದ ಅಸಾಧ್ಯವೆಂದು ಹೇಳಿದ್ದಾರೆ.

ಪ್ರಮೇಹ ರೋಗನಿರ್ಣಯ

ಆಯುರ್ವೇದ ವಿವರಿಸಿದಂತೆ ಪ್ರಮೇಹವನ್ನು ಪ್ರಮೇಹದ ಪೂರ್ವ ಲಕ್ಷಣಗಳು ಮತ್ತು ರೋಗಲಕ್ಷಣಗಳ ಮೂಲಕ ಕಂಡುಹಿಡಿಯಬಹುದು. ಇಂದು ವೈದ್ಯಕೀಯ ಕ್ಷೇತ್ರದಲ್ಲಿನ ತಾಂತ್ರಿಕ ಪ್ರಗತಿಯಿಂದಾಗಿ ರಕ್ತ ಮತ್ತು ಮೂತ್ರ ವಿಶ್ಲೇಷಣೆಯ ಮೂಲಕ ಪ್ರಮೇಹವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಬಹುದು. ನಾವು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುವುದರಿಂದ ಮಧುಮೇಹದ ಆಕಸ್ಮಿಕ ಗುರುತಿಸುವಿಕೆಯನ್ನು ತಡೆದು ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ಪ್ರಾರಂಭಿಸಬಹುದು .

ಆನುವಂಶಿಕವಾಗಿ ಮಧುಮೇಹದ ಇತಿಹಾಸವನ್ನು ಹೊಂದಿರುವವರು, ಕನಿಷ್ಠ ಚಟುವಟಿಕೆಯ ಜೀವನಶೈಲಿ ಹಾಗು ಅನಿಯಮಿತ ಆಹಾರ ಪದ್ಧತಿಗಳನ್ನು ನಡೆಸುತ್ತಿದ್ದಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆಯಿಂದ ಪ್ರಮೇಹವನ್ನು ಆರಂಭದಲ್ಲೇ ಪತ್ತೆ ಹಚ್ಚಬಹುದು.

ಆಯುರ್ವೇದಲ್ಲಿ ರೋಗ ಪರೀಕ್ಷೆ, ರೋಗದ ಕರಾರುವಕ್ಕಾದ ನಿರ್ಣಯವು ಚಿಕಿತ್ಸೆಯ ಮೊದಲ ಹಂತ. ರೋಗಿಗಳಲ್ಲಿನ ಕಾಯಿಲೆಗಳನ್ನು ಹೇಗೆ ನಿರ್ಣಯಿಸುವುದು ಮತ್ತು  ನಿಭಾಯಿಸುವುದು ಎಂಬುದರ ಕುರಿತು ನಿರ್ದಿಷ್ಟ ಮಾರ್ಗಸೂಚಿಗಳನ್ನು ಹಿಂದಿನ ಮಹಾನ್ ಋಷಿಗಳು ತಿಳಿಸಿದ್ದಾರೆ. ಅವರ ಬೋಧನೆಗಳು ಮತ್ತು ರೋಗಗಳ ಸಮಗ್ರ ವಿವರಣೆಯನ್ನು ಆಯುರ್ವೇದದ ಅನೇಕ ಗ್ರಂಥಗಳಲ್ಲಿ ಹೇಳಿದ್ದಾರೆ.

ವೈದ್ಯರು ಯಾವುದು ಸ್ವತಃ ಇಂದ್ರಿಯಗಳಿಂದಲೂ, ಮನಸ್ಸಿನಿಂದಲೂ ತಿಳಿದುಬರುತ್ತದೋ ಅದನ್ನು ಪ್ರತ್ಯಕ್ಷವೆಂದೂ, ಯುಕ್ತಿಯನ್ನು ಆಧರಿಸಿದ ಊಹೆಯನ್ನು ಅನುಮಾನವೆಂಬ ಮಾನದಿಂದ, ಮತ್ತು ಆಪ್ತರ ಉಪದೇಶಗಳಿಂದ ರೋಗದ ಬಗೆಗೆ ತಿಳಿಯಬಹುದು.

ಆಯುರ್ವೇದ ಗ್ರಂಥಗಳು ವಿವಿಧ ರೀತಿಯ ರೋಗನಿರ್ಣಯ ವಿಧಾನಗಳನ್ನು ರೋಗದ ಪೂರ್ವ ಲಕ್ಷಣಗಳು, ರೋಗದ ಲಕ್ಷಣಗಳು, ರೋಗೋತ್ಪತ್ತಿಯ ವಿಧಾನ, ರೋಗದ ಉಪಶಯ ಮತ್ತು ಅಷ್ಟವಿಧ ಪರೀಕ್ಷೆಗಳ ಮೂಲಕ ಹೇಗೆ ನಿರ್ಧರಿಸಬಹುದೆಂದು ತಿಳಿಸಿದ್ದಾರೆ.

ರೋಗನಿರ್ಣಯವು ರೋಗಿಯ ಸಂಪೂರ್ಣ ಶಾರೀರಿಕ ಮತ್ತು ಮಾನಸಿಕ ಸ್ಥಿತಿಯನ್ನು ಒಳಗೊಂಡು ಪ್ರಸ್ತುತ ಅನಾರೋಗ್ಯದ ಸ್ಥಿತಿಗೆ ಕಾರಣವಾದ ಅಂಶಗಳು ಮತ್ತು ಸೂಕ್ತ ಚಿಕಿತ್ಸೆಯನ್ನು ನೀಡುವ ಪ್ರಯತ್ನವನ್ನು ಒಳಗೊಂಡಿರುತ್ತದೆ.

ರೋಗಿಯ ಪರೀಕ್ಷೆಯನ್ನು ಆಯುರ್ವೇದವು ಎಂಟುವಿಧವಾದ ಪರೀಕ್ಷೆಗಳ ಮೂಲಕ ರೋಗದ ಹಾಗು ರೋಗಿಯ ಸ್ಥಿತಿಯನ್ನು ತಿಳಿಯಲು ಸಹಾಯ ಮಾಡುತ್ತದೆ. ಅವುಗಳೆಂದರೆ

  1. ನಾಡಿ ಪರೀಕ್ಷೆ
  2. ಮೂತ್ರ ಪರೀಕ್ಷೆ
  3. ಮಲ ಪರೀಕ್ಷೆ
  4. ನಾಲಿಗೆ ಪರೀಕ್ಷೆ
  5. ಶಬ್ದ ಪರೀಕ್ಷೆ
  6. ಸ್ಪರ್ಶ ಪರೀಕ್ಷೆ
  7. ದೃಷ್ಟಿ ಪರೀಕ್ಷೆ
  8. ರೂಪ ಪರೀಕ್ಷೆ

ಈ ಎಲ್ಲಾ ಪರೀಕ್ಷೆಗಳು  ರೋಗದ ಸ್ವರೂಪ, ಸ್ಥಿತಿ, ದೋಷಗಳ ಪ್ರಾಬಲ್ಯ ಮತ್ತು ಹಂತವನ್ನು ಗುರುತಿಸಲು ಸಹಾಯ ಮಾಡುತ್ತದೆ.

ಆಯುರ್ವೇದ ಚಿಕಿತ್ಸೆಯು ಮಧುಮೇಹದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ?

ನಮ್ಮ ಆಹಾರ, ಪಾನೀಯ, ಚಟುವಟಿಕೆಗಳು ಇತ್ಯಾದಿಗಳ ಮೂಲಕ ನಾವು ಏನನ್ನು ಸೇವಿಸುತ್ತೇವೆಯೋ ಅದು ದೇಹದಲ್ಲಿನ ದೋಷಗಳನ್ನು ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಕಾರಣವಾಗುತ್ತದೆ. ಈ ದೋಷಗಳ ಹೆಚ್ಚುವಿಕೆ ಮತ್ತು ಕಡಿಮೆಯಾಗುವಿಕೆಯ ವ್ಯತ್ಯಾಸವು ಮಿತಿಯಲ್ಲಿದ್ದರೆ, ದೋಷಗಳು ದೇಹದಲ್ಲಿ ಯಾವುದೇ ಶಾಶ್ವತ ಪರಿಣಾಮಗಳು ಬೀರದೆ ದೇಹವು ಆರೋಗ್ಯ ಸ್ಥಿತಿಯಲ್ಲಿರುತ್ತದೆ.

ಆದರೆ ಒಂದೇ ನಿರ್ದಿಷ್ಟ ಆಹಾರ ಮತ್ತು ಪಾನೀಯಗಳ ಸೇವನೆಯನ್ನು ನಿರಂತರ ಬಳಸಲಾರಂಭಿಸಿದರೆ, ಅಥವಾ ನಿರ್ದಿಷ್ಟ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ದೇಹದಲ್ಲಿ ದೋಷಗಳ ಹೆಚ್ಚುವಿಕೆಗೆ ಕಾರಣವಾಗುತ್ತದೆ. ಇದೇ ರೀತಿಯ ಚಟುವಟಿಕೆಯನ್ನು ಬಹುಕಾಲ ಮುಂದುವರಿಸಿದಲ್ಲಿ ನಿರ್ದಿಷ್ಟ ದೋಷವು ಸಂಚಯವಾಗಿ, ದೋಷಗಳು ದೇಹದಾದ್ಯಂತ ಹರಡಲು ಪ್ರಾರಂಭಿಸುತ್ತವೆ.

ಈ ಪರಿಚಲನೆಯ ಸಂಧರ್ಭದಲ್ಲಿ ದೋಷಗಳ ಸಂಚಾರಕ್ಕೆ ಅಡಚಣೆ ಉಂಟಾದಾಗ ಅವು ದೇಹದಲ್ಲಿನ ಅಡಚಣೆಯುಂಟಾದ ಪ್ರದೇಶದಲ್ಲಿ ನಿಂತು ಅಲ್ಲಿನ ಸಹಜ ಕಾರ್ಯಗಳಿಗೆ ಅಡಚಣೆಯುಂಟುಮಾಡಿ ದೇಹದಲ್ಲಿ ರೋಗೋತ್ಪಾದನೆಗೆ ಕಾರಣವಾಗುತ್ತವೆ. ಈ ಬದಲಾದ ಸ್ಥಿತಿಯು ರೋಗದ ಪ್ರಾರಂಭವನ್ನು ಸೂಚಿಸುವ ರೋಗಲಕ್ಷಣವನ್ನು ಉಂಟುಮಾಡುತ್ತದೆ.

ಆಯುರ್ವೇದವು ದೋಷಗಳ ಸಂಚಯದಿಂದ ಹಿಡಿದು ರೋಗಲಕ್ಷಣಗಳು ಕಾಣುವ ಹಂತದವರೆಗಿನ ರೋಗೋತ್ಪತ್ತಿಯ ವಿವಿಧ ಹಂತಗಳನ್ನು ಆರು ವಿಭಾಗಗಳನ್ನಾಗಿಸಿ(ಸಂಚಯ, ಪ್ರಕೋಪ, ಪ್ರಸರ, ಸ್ಥಾನಸಂಶ್ರಯ, ವ್ಯಕ್ತ ಮತ್ತು ಭೇದಾವಸ್ಥೆ) ವಿವರಿಸಿದ್ದಾರೆ.

ಈಗ ನಾವು ದೇಹದಲ್ಲಿ ರೋಗವು ಹೇಗೆ ಪ್ರಾರಂಭವಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಂಡೆವು. ಅಂತೆಯೇ ರೋಗದ ಚಿಕಿತ್ಸೆಗಾಗಿ ಆಯುರ್ವೇದವು ಭೂಮಿಯಲ್ಲಿ ದೊರಕುವ ಸಸ್ಯಗಳು, ಖನಿಜಗಳನ್ನು ಬಳಸಿ ರೋಗದ ನಿರ್ಮೂಲನೆ ಮಾಡುತ್ತದೆ. ಭೂಮಿಯಲ್ಲಿ ದೊರಕುವ ಪ್ರತಿಯೊಂದು ವಸ್ತುವೂ ತನ್ನದೆ ಆದ ಗುಣ ಸ್ವಭಾವಗಳನ್ನು ಹೊಂದಿ ಅವುಗಳಿಗನುಗುಣವಾಗಿ ತಮ್ಮ ಪ್ರಭಾವವನ್ನು ತೋರುತ್ತವೆ. ಈ ಗುಣ ಸ್ವಭಾವಗಳು ವಸ್ತುಗಳ ಮೂಲ ರಚನಾ ವಸ್ತುಗಳ ಮೇಲೆ ನಿರ್ಭರವಾಗಿದೆ. ಈ ಮೂಲವಸ್ತುಗಳನ್ನು ನಾವು ಪಂಚ ಮಹಾ ಭೂತಗಳೆಂದು ಕರೆಯುತ್ತೇವೆ.

ಆಯುರ್ವೇದವು ಬ್ರಹ್ಮಾಂಡದ ಪ್ರತಿಯೊಂದು ವಸ್ತುವು ಪಂಚಮಹಾಭೂತಗಳಿಂದ ರಚಿಸಲ್ಪಟ್ಟಿದೆಯೆಂದು ಹೇಳುತ್ತದೆ. ಪ್ರಪಂಚದಲ್ಲಿರುವ ಸಸ್ಯಗಳು, ಖನಿಜಗಳು, ಪ್ರಾಣಿಗಳು, ಮಾನವರೆಲ್ಲರೂ ಪಂಚಮಹಾಭೂತಗಳಿಂದ ರಚಿಸಲ್ಪಟ್ಟಿದ್ದು ಅವುಗಳ ವ್ಯತ್ಯಾಸವು ಪಂಚಮಹಾಭೂತಗಳ ಸಂಯೋಗದನುಸಾರವಾಗಿ ಬೇರೆಬೇರೆಯಾಗಿರುತ್ತದೆ. ಪ್ರಾಚೀನ ಋಷಿಗಳು ಈ ಸತ್ಯವನ್ನು ಕಂಡುಕೊಂಡು ತಮ್ಮ ಆರೋಗ್ಯದಲ್ಲಿ ಏರುಪೇರಾದಾಗ ಅವುಗಳನ್ನು ಸರಿಪಡಿಸಲು ಭೂಮಿಯಲ್ಲಿ ದೊರೆಯುವ ಸಸ್ಯ, ಖನಿಜ ಮುಂತಾದುವುಗಳನ್ನು ಬಳಸಿ ಹೇಗೆ ಗುಣಪಡಿಸಿಕೊಳ್ಳಬಹುದೆಂದು ಅರಿತರು.

ಇಂತಹ ಅರಿವಿನ ಸಾಗರವೇ ಆಯುರ್ವೇದದ ರೂಪದಲ್ಲಿ ಇಂದು ನಮ್ಮ ಮುಂದಿದೆ. ಉದಾಹರಣೆಗೆ ನಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಿದಲ್ಲಿ ಪ್ರಕೃತಿಯಲ್ಲಿ ದೊರೆಯುವ ಶೀತ ಗುಣ ಅಧಿಕವಿರುವ ಸಸ್ಯಗಳ ಬಳಕೆ ದೇಹದ ಉಷ್ಣತೆಯನ್ನು ಕಡಿಮೆಮಾಡುತ್ತದೆ.

ಪಂಚಮಹಾಭೂತಗಳು ನಮ್ಮ ದೇಹದ ರಚನೆಗೆ ನೆರವಾದರೆ ದೇಹದ ಕ್ರಿಯೆಗಳು ದೋಷಗಳಿಂದ ನಿರ್ವಹಿಸಲ್ಪಡುತ್ತದೆ. ನಮ್ಮ ದೇಹವು ವಾತ ಪಿತ್ತ ಕಫಗಳೆಂಬ ದೋಷಗಳ ಸಮತೋಲನದಲ್ಲಿ ಕಾರ್ಯನಿರ್ವಹಿಸುತ್ತದೆ. ಇವುಗಳನ್ನು ತ್ರಿದೋಷಗಳೆಂದೂ ಕರೆಯುತ್ತಾರೆ ಹಾಗು ಇವುಗಳ ಹೆಚ್ಚಳ ಅಥವಾ ಕ್ಷಯ, ರೋಗಕ್ಕೆ ಕಾರಣವಾಗಿದ್ದು ದೋಷಗಳ ಸಮಸ್ಥಿತಿಯು ಆರೋಗ್ಯವನ್ನು ಕಾಪಾಡುತ್ತದೆ.

ದೋಷಗಳು ಪಂಚ ಮಹಾಭೂತಗಳ ಪ್ರಾಧಾನ್ಯತೆಯಿಂದ ಮಾಡಲ್ಪಟ್ಟಿವೆ, ಹೇಗೆಂದರೆ ವಾತದೋಷವು ಆಕಾಶ ಮತ್ತು ವಾಯು ಮಹಾಭೂತಗಳ ಪ್ರಾಧಾನ್ಯತೆಯಿಂದ, ಪಿತ್ತವು ಅಗ್ನಿ ಮತ್ತು ಜಲ ಮಹಾಭೂತದ ಪ್ರಾಧಾನ್ಯತೆಯಿಂದ ಮತ್ತು ಕಫ ದೋಷವು ಜಲ ಮತ್ತು ಪೃಥ್ವಿ ಮಹಾಭೂತದ ಪ್ರಾಧಾನ್ಯತೆಯಿಂದ ಮಾಡಲ್ಪಟ್ಟಿವೆ.

ನಮ್ಮ ಆಹಾರವು ಪೃಥ್ವಿ ಮತ್ತು ಜಲ ಮಹಾಭೂತದ ಅಧಿಕತೆಯಿಂದ ಕೂಡಿದ್ದರೆ ಅದು ದೇಹದಲ್ಲಿ ಕಫ ದೋಷವನ್ನು ವೃದ್ಧಿ ಮಾಡುತ್ತದೆ.

ಆಯುರ್ವೇದದಲ್ಲಿ ಔಷಧಿಗಳಾಗಿ ಬಳಸುವ ವಸ್ತುಗಳು ತಮ್ಮ ರುಚಿ, ಗುಣ, ವೀರ್ಯ, ಪಚನಾಂತ್ಯದ ರುಚಿ, ಪ್ರಭಾವ ಮತ್ತು ಕರ್ಮಗಳ ಮೂಲಕ ಕೆಲಸ ಮಾಡುತ್ತವೆ.

ಪ್ರಮೇಹಕ್ಕೆ ಚಿಕಿತ್ಸೆ (Madhumehakke Ayurveda Chikitse)

ಪ್ರಮೇಹಗಳಲ್ಲಿ ಮೂರು ದೋಷಗಳು ಕೂಡ ತಮ್ಮ ಪ್ರಾಧಾನ್ಯತೆಗೆ ಅನುಗುಣವಾಗಿ ವಿವಿಧ ಲಕ್ಷಣಗಳನ್ನು ವ್ಯಕ್ತಪಡಿಸುತ್ತವೆ. ಲಕ್ಷಣಗಳ ಆಧಾರದ ಮೇಲೆ ಅವುಗಳನ್ನು ವಾತಜ, ಪಿತ್ತದ ಹಾಗು ಕಫದ ಪ್ರಮೇಹವೆಂದೂ ವರ್ಗೀಕರಿಸಿದ್ದಾರೆ. ಮಧುಮೇಹವು ವಾತ ಪ್ರಧಾನತೆಯಿಂದ ಉಂಟಾಗುವ ಪ್ರಮೇಹವಾಗಿದೆ. ಆಯುರ್ವೇದದಲ್ಲಿ ಪ್ರಮೇಹದ ಚಿಕಿತ್ಸೆಯು ದೋಷಗಳ ಪ್ರಧಾನತೆಗೆ ಅನುಗುಣವಾಗಿ ನೀಡಲಾಗುತ್ತದೆ.

ಬೊಜ್ಜು ಮತ್ತು ಶಾರೀರಿಕ ಧೃಡತೆ ಹೊಂದಿರುವ ರೋಗಿಗಳಿಗೆ ಶೋಧನಾ ಚಿಕಿತ್ಸೆಯನ್ನು ಮತ್ತು ದುರ್ಬಲರಾದವರಿಗೆ ಶರೀರ ಪೋಷಣೆ ಪ್ರಧಾನವಾಗಿರುವ ಚಿಕಿತ್ಸೆ ನೀಡಬೇಕು ಎಂದು ಆಚಾರ್ಯ ಚರಕರು ಹೇಳಿದ್ದಾರೆ.

ಆಚಾರ್ಯ ಸುಶ್ರುತ ಅವರು ದುರ್ಬಲ ಅಥವಾ ಅಲ್ಪ ಬಲದ ಪ್ರಮೇಹ ರೋಗಿಗಳಿಗೆ ತರ್ಪಣ ಚಿಕಿತ್ಸೆಯನ್ನೂ ಮತ್ತು ಬೊಜ್ಜು ಹೊಂದಿರುವವರಿಗೆ ಅಪತರ್ಪಣ ಚಿಕಿತ್ಸೆ ನೀಡಬೇಕು ಎಂದು ಹೇಳಿದ್ದಾರೆ.
ಯಾವ ಪ್ರಮೇಹ ರೋಗಿಗೆ ಸಂಶೋಧನ ಯೋಗ್ಯವಲ್ಲವೋ ಅಂಥವನ ಪ್ರಮೇಹ ಚಿಕಿತ್ಸೆಗಾಗಿ ಶಮನ ಚಿಕಿತ್ಸೆಯನ್ನು ನೀಡಬೇಕು.

ಆಯುರ್ವೇದದಲ್ಲಿ ಪ್ರಮೇಹದ ಚಿಕಿತ್ಸೆಯು ಮುಖ್ಯವಾಗಿ ಈ ಮೂರು ಸ್ತಂಭಗಳ ಮೇಲೆ ಅವಲಂಬಿತವಾಗಿರುತ್ತದೆ. ಅವುಗಳೆಂದರೆ

  1. ಆಹಾರ
  2. ಜೀವನಶೈಲಿ
  3. ಔಷಧಿ

ಆಹಾರ

Diet Therapy

ದೇಹಕ್ಕೆ ಸೇರುವ ರೋಗಕಾರಕ ಅಂಶಗಳನ್ನು ತಪ್ಪಿಸುವುದು ಚಿಕಿತ್ಸೆಯ ಮೊದಲ ಹಂತ. ಆಯುರ್ವೇದದಲ್ಲಿ ಇದನ್ನು ‘ನಿದಾನ ಪರಿವರ್ಜನ’ ಎಂದು ಕರೆಯಲಾಗುತ್ತದೆ. ಎಲ್ಲಾ ಆಯುರ್ವೇದ ವಿದ್ವಾಂಸರು ಮತ್ತು ಗ್ರಂಥಗಳು ಚಿಕಿತ್ಸೆಯಲ್ಲಿ ರೋಗಕ್ಕೆ ಕಾರಣವಾಗುವ ಅಂಶಗಳ ಬಳಕೆಯನ್ನು ಸಂಪೂರ್ಣವಾಗಿ ವರ್ಜಿಸಲು ಹೇಳುತ್ತಾರೆ.

ಚಿಕಿತ್ಸೆಯಲ್ಲಿ ರೋಗದ ವಿರುದ್ಧ ಗುಣ ಪ್ರಧಾನವಾಗಿರುವ ಆಹಾರವನ್ನು ಎಚ್ಚರಿಕೆಯಿಂದ ಸೇವಿಸಲು ಸೂಚಿಸಲಾಗುತ್ತದೆ. ರೋಗದ ಸ್ಥಿತಿ ಮತ್ತು ಹಂತವನ್ನು ಅವಲಂಬಿಸಿ ಇದನ್ನು ನಿರ್ಣಯಿಸಲಾಗುತ್ತದೆ. ಮುಖ್ಯವಾಗಿ ಅನುಚಿತ ಆಹಾರ ಪದ್ಧತಿ ಮತ್ತು ಜೀವನಶೈಲಿಯು ಪ್ರಮೇಹಕ್ಕೆ ಪ್ರಮುಖ ಕಾರಣವಾಗಿರುತ್ತದೆ, ಆದ್ದರಿಂದ ಜೀರ್ಣ ಶಕ್ತಿಯನ್ನು (ಅಗ್ನಿ) ಕಾಪಾಡಿಕೊಳ್ಳುವುದರ ಜೊತೆಗೆ ಆಹಾರ ಮತ್ತು ಜೀವನಶೈಲಿಯ ಮಾರ್ಪಾಡುಗಳು ಬದಲಾಗಬೇಕಾದ ಪ್ರಾಥಮಿಕ ವಿಷಯಗಳಾಗಿವೆ.

ಜೀವನಶೈಲಿ

Lifestyle

ನಾವು ಪ್ರಮೇಹಕ್ಕೆ ಕಾರಣವಾಗುವ ಅಂಶಗಳನ್ನು ಗಮನಿಸಿದಾಗ ಹಗಲು ನಿದ್ರೆ , ವ್ಯಾಯಾಮವಿಲ್ಲದಿರುವಿಕೆ, ಆಲಸ್ಯ, ದೇಹದಲ್ಲಿ ಕಫ ದೋಷದ ಹೆಚ್ಚಳಕ್ಕೆ ಕಾರಣವಾಗಿ ಪ್ರಮೇಹವನ್ನು ಉಂಟುಮಾಡುತ್ತದೆ. ಇಲ್ಲಿ ನಾವು ಕಫ ಹಾಗು ಮೇದಸ್ಸನ್ನು ಕಡಿಮೆಗೊಳಿಸುವ ವ್ಯಾಯಮ, ಕುಸ್ತಿ, ಕುದುರೆ ಸವಾರಿ, ದೂರದ ನಡಿಗೆ ಅಥವಾ ಯಾವುದೇ ದೈಹಿಕ ಶ್ರಮದ ಕೆಲಸಗಳನ್ನು ಅಳವಡಿಸಿಕೊಳ್ಳುವುದು ಪ್ರಮೇಹದಲ್ಲಿ ಹಿತಕಾರಿ. 

ಔಷಧಿ 

Medicine

ಆಯುರ್ವೇದವು ಪ್ರಮೇಹದ ಚಿಕಿತ್ಸೆಗಾಗಿ ಹಲವಾರು ಔಷಧಗಳ ತಯಾರಿಕೆಯನ್ನು ತಿಳಿಸಿದೆ. ಏಕಮೂಲಿಕೆಗಳಿಂದ ಹಿಡಿದು ಬಹುಮೂಲಿಕೆಗಳ ಸಂಯೋಜನೆಯ ಪ್ರಯೋಗಗಳು ಪ್ರಮೇಹಕ್ಕಾಗಿ ಹೇಳಲ್ಪಟ್ಟಿವೆ. ಪ್ರಮೇಹದ ಉತ್ಪತ್ತಿಗೆ ಕಫ ದೋಷ ಪ್ರಧಾನ ಕಾರಣವಾಗಿದ್ದು ದೂಷಿತಗೊಳ್ಳುವ ಧಾತುಗಳು ಸಹ ಒಂದೇ ರೀತಿಯ ಗುಣಗಳನ್ನು ಹೊಂದಿವೆ. ಪ್ರಮೇಹ ಚಿಕಿತ್ಸೆಯಲ್ಲಿ ಬಳಸುವ ಹೆಚ್ಚಿನ ಔಷಧಿಗಳು ಕಫ ಮತ್ತು ದೂಷಿತ ಧಾತುಗಳ ಗುಣಗಳಿಗೆ ವಿರುದ್ಧವಾಗಿರುವ ಕಹಿ(ತಿಕ್ತಾ), ಕಟು (ಖಾರ) ಮತ್ತು ಒಗರು (ಕಷಾಯ) ರುಚಿಯನ್ನು ಹೊಂದಿರುತ್ತವೆ.

ಪ್ರಮೇಹ ಚಿಕಿತ್ಸೆಗೆ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಗಿಡಮೂಲಿಕೆಗಳ ಕೆಲವು ಸಂಯೋಜನೆಗಳು

ಕಫ ದೋಷ ಪ್ರಾಧಾನ್ಯತೆಯಿಂದ ಬಂದ ಪ್ರಮೇಹದಲ್ಲಿ ಕೆಳಗೆ ಹೇಳಿರುವ ಔಷಧಿಗಳ ಕಷಾಯ ತಯಾರಿಸಿ ಜೇನಿನೊಂದಿಗೆ ಸೇವಿಸಬೇಕು.

  1. ಅರಿಶಿನ + ನೆಲ್ಲಿಯ ರಸ + ಜೇನು
  2. ದಾರ್ವಿ + ಸುರಾಹ್ವಾ + ತ್ರಿಫಲ + ಮುಸ್ತಾ ಕಷಾಯ
  3. ಚಿತ್ರಕ + ತ್ರಿಫಲ + ದಾರ್ವಿ + ಕಳಿಂಗ + ಜೇನು
  4. ಗುಡುಚಿ ರಸ + ಜೇನು
  5. ನೆಲ್ಲಿ ರಸ + ಜೇನು

ಪಿತ್ತ ಪ್ರಧಾನ ಪ್ರಮೇಹದಲ್ಲಿ ಕೆಳಗೆ ಹೇಳಿರುವ ಔಷಧಿಗಳ ಕಷಾಯ ತಯಾರಿಸಿ ಜೇನಿನೊಂದಿಗೆ ಸೇವಿಸಬೇಕು.

  1. ರೋದ್ರ + ಅಭಯ + ತೋಯಾದ  + ಕಟ್ಫಲ
  2. ಪಾಠ + ವಿಡಂಗ + ಅರ್ಜುನ + ಧನ್ವನ
  3. ಗಾಯತ್ರಿ + ದಾರ್ವಿ + ಕ್ರಿಮಿಹ್ರತ್ + ಧವ

ವಾತ ಪ್ರಧಾನ ಪ್ರಮೇಹದಲ್ಲಿ ಕೆಳಗಿನ ಔಷಧಿಗಳನ್ನು ಬಳಸಿ ಔಷಧಯುಕ್ತ ಎಣ್ಣೆ ಅಥವಾ ತುಪ್ಪವನ್ನು ತಯಾರಿಸಿ ಬಳಸಬೇಕು

  1. ಉಶಿರಾ + ರೋಧ್ರಾ + ಅರ್ಜುನ + ಚಂದನಾ
  2. ಪಟೋಲಾ + ನಿಂಬಾ + ಅಮಲಕ + ಅಮೃತ
  3. ರೋಧ್ರಾ + ಅಂಬು + ಕಲಿಯಕ + ಧಾತಕಿ

ಪ್ರಮೇಹ ರೋಗಿಗಳ ಆಹಾರವಾದ ಯವೆ ಮತ್ತು ಗೋಧಿಯನ್ನು ಬಳಸುವ ಮೊದಲು ಮೇಲೆ ತಿಳಿಸಿದ ಕಷಾಯಗಳಲ್ಲಿ ನೆನೆಸಿದ ಬಳಿಕ ತಯಾರಿಸಿದ ಆಹಾರ  ಪ್ರಮೇಹದಲ್ಲಿ ಪರಿಣಾಮಕಾರಿ.
ದುರ್ಬಲವಾಗಿರುವ ಪ್ರಮೇಹ ರೋಗಿಗೆ ಮೇದಸ್ಸನ್ನು ಮತ್ತು ಮೂತ್ರವನ್ನು ಹೆಚ್ಚಿಸದೆ ಇರುವಂತಹ ಆಹಾರ ಮತ್ತು ಔಷಧಿಗಳಿಂದ ಪೋಷಣೆಯ ಚಿಕಿತ್ಸೆಯನ್ನು ಮಾಡಬೇಕು.  

ಪ್ರಮೇಹಕ್ಕೆ ಪಂಚಕರ್ಮ ಚಿಕಿತ್ಸೆ 

ಪಂಚಕರ್ಮ ಚಿಕಿತ್ಸೆಯು ದೇಹದಲ್ಲಿ ಶೇಖರಗೊಂಡಿರುವ ವಿಷವಸ್ತುಗಳು ಮತ್ತು ಹೆಚ್ಚಾದ ದೋಷಗಳನ್ನು ದೇಹದಿಂದ ಹೊರಗೆ ಹಾಕುವ ಒಂದು ಪ್ರಕ್ರಿಯೆಯಾಗಿದೆ. ಇದನ್ನು ಶೋಧನ ಅಥವಾ ದೇಹ ಶೋಧನ ಚಿಕಿತ್ಸೆಯೆಂದೂ ಕರೆಯುತ್ತಾರೆ. ಪಂಚಕರ್ಮ ಚಿಕಿತ್ಸೆಗಳನ್ನು ರೋಗದ ಮತ್ತು ರೋಗಿಯ ಬಲವನ್ನು ಅನುಸರಿಸಿ ನಿರ್ದೇಶಿಸಲಾಗುತ್ತದೆ. ಪ್ರಮೇಹ ರೋಗಿಗಳಿಗೆ ಪಂಚಕರ್ಮ ಚಿಕಿತ್ಸೆಯನ್ನು ಅತ್ಯಂತ ಎಚ್ಚರಿಕೆಯಿಂದ ನೀಡಬೇಕು, ಏಕೆಂದರೆ ಅದು ದೇಹದಲ್ಲಿ ಕ್ಷೀಣತೆಯನ್ನು ಉಂಟುಮಾಡುತ್ತದೆ, ಹಾಗಾಗಿ ಪಂಚಕರ್ಮ ಚಿಕಿತ್ಸೆಯನ್ನು ರೋಗಿಯು ಬಲವಾಗಿದ್ದಲ್ಲಿ ಮಾತ್ರವೇ ಮಾಡಬೇಕು. ದುರ್ಬಲ ರೋಗಿಗಳಿಗೆ ಮತ್ತು ಪಂಚಕರ್ಮ ಚಿಕಿತ್ಸೆಗಳಿಗೆ ಸೂಕ್ತವಲ್ಲದವರಿಗೆ ದೋಷಗಳನ್ನು ಶಮನ ಮಾಡುವ ಚಿಕಿತ್ಸೆಗಳ ಮುಖಾಂತರ ಚಿಕಿತ್ಸೆ ನೀಡಬೇಕು.

ಉದ್ವರ್ತನದಂತಹ ಔಷಧಿಯುಕ್ತ ಚೂರ್ಣಗಳಿಂದ ದೇಹದ ತಿಕ್ಕುವಿಕೆ, ಭಾರೀ ದೈಹಿಕ ವ್ಯಾಯಾಮ, ರಾತ್ರಿಯಲ್ಲಿ ಎಚ್ಚರವಾಗಿರುವುದು,ದೇಹದಲ್ಲಿ ಕಫ ಮತ್ತು ಮೇದಸ್ಸುಗಳನ್ನು ತಗ್ಗಿಸಲು ಸಹಾಯ ಮಾಡುವ ಕ್ರಿಯೆಗಳು ಪ್ರಮೇಹ ರೋಗಿಗಳಲ್ಲಿ ಪ್ರಯೋಜನಕಾರಿ.

ಪ್ರಮೇಹದಿಂದ ಉಂಟಾಗುವ ಇತರೆ ತೊಂದರೆಗಳು.

ಪ್ರಮೇಹದಲ್ಲಿ ಕೆಳಕಂಡ ತೊಂದರೆಗಳು ಕಾಣಿಸುವುದೆಂದು ಆಚಾರ್ಯ ಚರಕರು ಹೇಳಿದ್ದಾರೆ

  • ಅತಿಯಾದ ಬಾಯಾರಿಕೆ
  • ಅತಿಸಾರ
  • ಜ್ವರ
  • ಉರಿಯ ಅನುಭವ
  • ದುರ್ಬಲತೆ
  • ಆರುಚಿ
  • ಜೀರ್ಣವಾಗದಿರುವಿಕೆ
  • ಮಾಂಸಗಳ ಕೊಳೆಯುವಿಕೆ
  • ಪಿಡಕೆಗಳು  
  • ಚರ್ಮದಲ್ಲಿ ಕೆಂಪು ಅಥವಾ ಬಿಳಿ ವರ್ಣದ ಗುಳ್ಳೆಗಳು
  • ಕುರುಗಳು

ಪ್ರಮೇಹ ಪಿಡಕಗಳು

treatment of diabetic foot

ವಸೆ ಮತ್ತು ಮೇದಸ್ಸಿನಿಂದ ಆವರಿಸಿಕೊಂಡ ಪ್ರಮೇಹ ರೋಗಿಗೆ ತ್ರಿದೋಷಗಳು ಧಾತುಗಳನ್ನು ಕೆಡಿಸಿ ಹತ್ತು ವಿಧವಾದ ಪಿಡಕಗಳನ್ನು ಉಂಟುಮಾಡುತ್ತದೆ. ಪಿಡಕಗಳು ಪ್ರಮೇಹ ರೋಗದ ಉಲ್ಬಣತೆಯಿಂದ ಉಂಟಾಗುವ ತೊಂದರೆಗಳಾಗಿವೆ.

ಪ್ರಮೇಹಾ ಪಿಡಕಗಳು

  1. ಶರಾವಿಕಾ – ಮಧ್ಯಬಾಗ ತಗ್ಗಾಗಿ ರೂಪದಲ್ಲಿಯೂ ಗಾತ್ರದಲ್ಲಿಯೂ ಶರಾವದ (ಗಡಿಗೆಯ) ಹಾಗಿರುವಂತದ್ದು .
  2. ಸರ್ಶಾಪಿಕಾ –  ಬಿಳಿ ಬಣ್ಣದ ಸಾಸಿವೆಯ ಅಕಾರ ಮತ್ತು ಪ್ರಮಾಣವುಳ್ಳ ಪಿಡಕವು ಸರ್ಶಪಿಕ.
  3. ಕಚ್ಚಪಿಕಾ – ಆಮೆಯ ಆಕಾರದಲ್ಲಿದ್ದು ಉರಿಯಿಂದ ಕೂಡಿದ್ದು ಕಚ್ಛಪಿಕಾ.
  4. ಜಾಲಿನಿ – ಮಾಂಸ ಜಾಲದ ಮಧ್ಯವಿರುವ ಮತ್ತು ಕಠಿಣವಾದ ಉರಿಯುಳ್ಳ ಪಿಡಕವು ಜಾಲಿನೀ.
  5. ವಿನತಾ – ನೀಲವರ್ಣದ ದೊಡ್ಡ ಗಾತ್ರವುಳ್ಳ ಪಿಡಕೆಯು ವಿನತಾ.
  6. ಪುತ್ರಿಣೀ – ದೊಡ್ಡ ಪಿಡಕಗಳೊಂದಿಗೆ ಚಿಕ್ಕವುಗಳು ಕೂಡಿಕೊಂಡಿರುವುದು ಪುತ್ರಿಣೀ.
  7. ಮಸೂರಿಕಾ – ಮಸೂರ ಧಾನ್ಯದ ಆಕೃತಿಯುಳ್ಳದ್ದು ಮಸೂರಿಕಾ.
  8. ಅಲಜೀ – ಕೆಂಪು ಕಪ್ಪು ಬಣ್ಣ ಮಿಶ್ರವುಳ್ಳ ಒಡಕುಳ್ಳ ಭಯಂಕರವಾದ ಪಿಡಕವು ಅಲಜೀ
  9. ವಿದಾರಿಕಾ  – ನೆಲಗುಂಬಳದ ಗಡ್ಡೆಯಂತಿರುವ ಉರುಟಾದ ಮತ್ತು ಗಟ್ಟಿಯಾದ ಪಿಡಕೆಯು ವಿದಾರಿಕಾ.
  10. ವಿದ್ರಧಿಕಾ – ವಿದ್ರಧಿಯ ಲಕ್ಷಣಗಳುಳ್ಳ ಪಿಡಕೆಯು ವಿದ್ರಧಿಕಾ.

ವಿದ್ರಧಿಗಳು ಆರಂಭದ ಹಂತದಲ್ಲಿರುವಾಗಲೇ ಅವುಗಳ ದೋಷಗಳನ್ನು ಕಾರಣ ಮತ್ತು ಲಕ್ಷಣಗಳಿಂದ ಗೊತ್ತುಮಾಡಿ ಚಿಕಿತ್ಸೆಮಾಡಬೇಕು. ಪಿಡಕೆಗಳನ್ನ ಸರಿಯಾದ ಸಮಯದಲ್ಲಿ ಉಪಚರಿಸದಿದ್ದರೆ ಅವು ಬಾಯಾರಿಕೆ, ಉಬ್ಬಸ, ಮಾಂಸ ಕೊಳೆಯುವಿಕೆ, ಮೂರ್ಛೆ, ಬಿಕ್ಕಳಿಕೆ, ಮದ, ಜ್ವರ, ವಿಸರ್ಪ ಮುಂತಾದ ತೊಂದರೆಗಳನ್ನು ಉಂಟುಮಾಡುತ್ತದೆ.
ಹೆಚ್ಚಿರುವ ದೋಷಗಳನ್ನು ದೇಹದಿಂದ ಹೊರಹಾಕಿದ ನಂತರ ಔಷಧಿಗಳಾಗಿ ಬೇವು, ಗುಗ್ಗುಳ, ಪಟೋಲ, ಅಮೃತಬಳ್ಳಿ, ಮಂಜಿಷ್ಟ ಮುಂತಾದುವುಗಳನ್ನು ಪ್ರಮೇಹ ಪಿಡಕದ ಚಿಕಿತ್ಸೆಯಲ್ಲಿ ಬಳಸುತ್ತಾರೆ.

ಪ್ರಮೇಹದಲ್ಲಿ ಆಹಾರ

Diet for Diabetes

ಪಥ್ಯ ಅಥವಾ ಸರಿಯಾದ ಆಹಾರವು ಪ್ರಮೇಹ ಚಿಕಿತ್ಸೆಯ ಪ್ರಮುಖ ಅಂಶವಾಗಿದೆ. ಪ್ರಮೇಹ ರೋಗಿಗಳಿಗೆ ಈ ಕೆಳಗಿನ ಆಹಾರಗಳನ್ನು ನೀಡಬಹುದು.

  1. ಶಾಲ್ಯಕ್ಕಿ
  2. ೬೦ ದಿನಗಳಲ್ಲಿ ಬೆಳೆಯುವ ಬತ್ತದ ಅಕ್ಕಿ
  3. ಯವೆ ಗೋಧಿ
  4. ಗೋಧಿ
  5. ಹಾರಕ ಧಾನ್ಯ

ಮೇಲೆ ಹೇಳಿದ ಧಾನ್ಯಗಳಲ್ಲಿ ಹಳೆದಾದವುಗಳನ್ನು ಕಡಲೆ, ತೊಗರಿ, ಹುರುಳಿ ಇವುಗಳೊಳಗೆ ಒಂದರೊಂದಿಗೆ ದಂತಿ, ಇಂಗಳದ ಮರ, ಸಾಸಿವೆ, ಆತಸೀ ಇವುಗಳ ತೈಲದ ಕೂಡಿಕೆಯಿಂದ ತಯಾರಿಸಲ್ಪಟ್ಟ ಕಹಿ ಮತ್ತು ಚೊಗರು ವರ್ಗಗಳ ಶಾಕಗಳೊಂದಿಗೆ, ಹುಳಿ ಮತ್ತು ತುಪ್ಪಗಳ ಸೇರಿಕೆಯಿಲ್ಲದೆ ಓಣ ಪ್ರದೇಶದಲ್ಲಿ ದೊರೆಯುವ ಪ್ರಾಣಿಗಳ ಮಾಂಸಗಳಿಂದ ಮೇದಸ್ಸನ್ನು ತೆಗೆದುಬಿಟ್ಟು ತಯಾರಿಸಲ್ಪಟ್ಟ ಆಹಾರವನ್ನು ಸೇವಿಸಬೇಕು.

ಪ್ರಮೇಹದಲ್ಲಿ ಅಪಥ್ಯ

ಪ್ರಮೇಹದ ಉತ್ಪತ್ತಿಗೆ ಕಾರಣವಾಗುವ ಅಂಶಗಳನ್ನು ವರ್ಜಿಸುವುದು ಚಿಕಿತ್ಸೆಯ ಅರ್ಧ ಭಾಗವೆಂದು ಪರಿಗಣಿಸಲಾಗಿದೆ. ಅವುಗಳು ಯಾವುದೆಂದರೆ

  • ಹೊಟ್ಟು ತೆಗೆದ ಹಸಿ ಅಥವಾ ಬೇಯಿಸಿದ ಯವೆ ಗೋಧಿ ಅಥವಾ ಗೋಧಿಯಿಂದ ಮಾಡಲ್ಪಟ್ಟ ಹುಳಿನೀರು.
  • ಹೊಟ್ಟು ತೆಗೆಯದೆ ಹಸೀ ಯವೆ ಗೋಧಿಯ ಕಡಿಯಿಂದ ತಯಾರಿಸಿದ ಹುಳಿನೀರು.
  • ಸುರೆಯನ್ನು ಅಸವವನ್ನು ಕೂಡಿಸಿ ಮಾಡಿದ ಮದ್ಯ.
  • ಅಕ್ಕಿಹಿಟ್ಟು ಮುಂತಾದವುಗಳಿಂದ ಮಾಡಿದ ಮದ್ಯ.
  • ಆಸವ
  • ಹಾಲು
  • ತುಪ್ಪ
  • ತೈಲ
  • ಕಬ್ಬಿನ ರಸದಿಂದ ಮಾಡಲ್ಪಟ್ಟ ಪದಾರ್ಥಗಳು
  • ಮೊಸರು
  • ಹಿಟ್ಟಿನ ಆಹಾರ
  • ಹುಳಿ ಪಾನಕ
  • ಗ್ರಾಮವಾಸಿ, ನೀರಿನಲ್ಲಿ, ನೀರಹತ್ತಿರ ವಾಸಿಸುವ ಪ್ರಾಣಿ ಪಕ್ಷಿಗಳ ಮಾಂಸದ ಸೇವೆನೆ
  • ಜಡ ಜೀವನ ಶೈಲಿ
  • ಅತಿನಿದ್ರೆ ಮತ್ತು ಅಕಾಲ ನಿದ್ರೆ
  • ಹೊಸ ಧಾನ್ಯಗಳ ಆಹಾರ
  • ಕಫ ಮತ್ತು ಮೇದಸ್ಸನ್ನು ಹೆಚ್ಚಿಸುವ ಆಹಾರಗಳು 

ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗದವರಿಗೆ ಪ್ರಮೇಹ ಚಿಕಿತ್ಸೆ

ಎಲ್ಲಾ ಪ್ರಮೇಹಾ ರೋಗಿಗಳು ಚಿಕಿತ್ಸೆ ಮತ್ತು ಔಷಧಿಗಳನ್ನು ಪಡೆಯಲು ಸಾಕಷ್ಟು ಶ್ರೀಮಂತರಾಗಿಲ್ಲದಿರಬಹುದು. ಇಂತಹ ಪ್ರಮೇಹ ರೋಗಿಗಳನ್ನು ಗುಣಮುಖರಾಗಿಸಲು ಅಷ್ಟಾಂಗ ಹೃದಯದವೆಂಬ ಪುಸ್ತಕದಲ್ಲಿ ಈ ಕೆಳಗಿನ ಸಲಹೆಗಳನ್ನು ನೀಡಲಾಗಿದೆ.

ಪ್ರಮೇಹ ರೋಗಿಗಳು ಪಾದರಕ್ಷೆ ಅಥವಾ ಛತ್ರಿ ಬಳಸದೆ ೧೦೦ ಯೋಜನಾ ದೂರವನ್ನು ಅಂದರೆ ಸುಮಾರು 800 ರಿಂದ 900 ಮೈಲುಗಳಷ್ಟು ದೂರ ನಡೆಯಬೇಕು ಮತ್ತು ಮುನಿಗಳ ಅಥವಾ ಋಷಿಗಳ ತರಹದ ಜೀವನವನ್ನು ಪಾಲಿಸಬೇಕು.
ಪ್ರಮೇಹ ರೋಗಿಯು ಮಾಡಬಹುದಾದ ಇನ್ನೊಂದು ಕೆಲಸವೆಂದರೆ ಸ್ವತಃ ಒಂದು ಕೊಳ ಅಥವಾ ನೀರಿನ ಜಲಾಶಯವನ್ನು ಅಗೆಯುವುದು ಅಥವಾ ಹಸುಗಳ ಹಿಂಡಿನೊಂದಿಗೆ ಅಲೆದಾಡುವುದು.
ಈ ಎಲ್ಲಾ ಅಭ್ಯಾಸಗಳು ಪ್ರಮೇಹಿ ರೋಗಿಗಳ ಆಹಾರ ಹಾಗು ಜೀವನ ಶೈಲಿಯ ಬದಲಾವಣೆಗಳಾಗಿದ್ದು ದೈಹಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಸರಳ ಜೀವನವನ್ನು ನಡೆಸುವ ಮಹತ್ವವನ್ನು ಸೂಚಿಸುತ್ತವೆ.

ಕೊನೆಯಲ್ಲಿ 

ಪ್ರಮೇಹವನ್ನು ಆಯುರ್ವೇದದಲ್ಲಿ ಹೇಳಿರುವ ಎಂಟು ತೀವ್ರ ಯಾತನೆ ನೀಡುವ ರೋಗಗಳಲ್ಲಿ ಒಂದಾಗಿ ಪರಿಗಣಿಸಿದೆ. ಇದು ಕಫ ದೋಷದ ಪ್ರಾಬಲ್ಯತೆಯಿಂದ ಉಂಟಾಗಿ ಮೂತ್ರಜನಕಾಂಗಗಳ ವಿಕಾರತೆಗೆ ಕಾರಣವಾಗುತ್ತದೆ.
ಆಯುರ್ವೇದ ಮಧುಮೇಹ ಚಿಕಿತ್ಸೆಯು ಆಹಾರ ಬದಲಾವಣೆಗಳು, ಜೀವನಶೈಲಿಯ ಮಾರ್ಪಾಡು ಮತ್ತು ಔಷಧಿಗಳ ಸರಿಯಾದ ಅನ್ವಯದ ಮೂಲಕ ಪ್ರಮೇಹವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ ಪ್ರಮೇಹದಿಂದ ಉಂಟಾಗುವ ಇತರೆ ತೊಂದರೆಗಳನ್ನು ತಡೆಯಯಬಹುದು

ಮಧುಮೇಹಕ್ಕೆ ಆಯುರ್ವೇದ ಚಿಕಿತ್ಸೆಗಾಗಿ ಕರೆ ಮಾಡಿ +919945850945

P.S  ಇಲ್ಲಿ ನೀಡಲಾದ ಎಲ್ಲಾ ಅಂಶಗಳು ಮಾಹಿತಿಯುಕ್ತ ಉದ್ದೇಶಗಳಿಗಾಗಿ ಮಾತ್ರವೇ ಹೊರತು ವೈದ್ಯಕೀಯ ಸಲಹೆಗೆ ಬದಲಿಯಲ್ಲ. ನಿಮ್ಮ ಆರೋಗ್ಯ ಅಗತ್ಯಗಳಿಗಾಗಿ ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಸ್ವಯಂ ಔಷಧಿ ಸೇವನೆಯು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ.